ಗಾರೆ ಕೆಲಸ ಮಾಡ್ತಾಯಿದ್ರು ನಮ್ಮಪ್ಪಾಮ್ಮ... ನನಗೂ ಹತ್ ವರ್ಷಾ ಆಗಿತ್ತು... ಬೀಡೀಗೆ ಕಾಸು ಬೇಕಿತ್ತು... ಪೈಸಾ ಪೈಸಾ ಕೂಡಿಡೋದೂ, ಹುಡಗರ್ ಜೊತೆ ಮರ ಹತ್ತಿ ಬೀಡಿ ಸೇದೋದು... ಒಂದ್ ಮನೇಗೆ ಕೆಲಸಕ್ ಸೇರ್ಕೊಂಡೆ... ಅಲ್ಲಿ ನನ್ ವಯಸ್ಸಿನ್ ಹುಡುಗ ಇದ್ದ... ಹಾಕ್ಕೊಳೋಕ್ಕೆ ಒಳ್ಳೇ ಬಟ್ಟೆ... ಸೈಕಲ್ಲು... ಮನಸ್ಸಿಗೆ ಸ್ವಲ್ಪ ಅಲ್ಲಾ... ತುಂಬಾನೇ ಬೇಜಾರಾಗ್ತಾಯಿತ್ತು... ಆಗ ಕೇಬಲ್ ಹೊಸದಾಗಿ ಬಂದಿದ್ದ ಕಾಲ... ಅವನು ಯಾವಾಗ್ಲೂ ಕಾರ್ಟೂನ್ ಚಾನಲ್ ಹಾಕ್ಕೊಂಡ್ ಕೂತಿರ್ತಾಯಿದ್ದ... ನಾನೂ ಕೆಲಸ ಬಿಟ್ಟು ನೋಡ್ತಾ ಇದ್ಬಿಡ್ತಿದ್ದೆ... ಬೈಸ್ಕೊತಾನೂ ಇದ್ದೆ... ಆದ್ರೂ ಮನಸ್ಸು ತಡೀತಾಯಿರ್ಲಿಲ್ಲಾ... ಅವನ್ ಬರ್ತಡೇ ಬೇರೆ ಮಾಡದ್ರೂ... ಹೌದು, ನಿಮಗೇ ಗೊತ್ತು ಈ ಕಥೆ... ಕೇಕ್ ಸಿಗಲಿಲ್ಲಾ... ಚಿಪ್ಸ್ ಸಿಗಲಿಲ್ಲಾ... ಆದರೂ ಮನಸ್ಸಿನಲ್ಲಿ ಏನೂ ಖುಷಿ... ನನ್ಮಗಂದು ಸಿನಿಮಾಗಳಲ್ಲಿ ತೋರಿಸೋ ಥರ ಹೀರೋಗಳು ಚಿಕ್ ವಯಸ್ಸಿನಲ್ಲಿ ಕಷ್ಟ ಅನುಭವಿಸೋ ಥರ ಒಂಥರಾ ಫಿಲ್ಮೀ ಸ್ಟೋರಿ ನಂದೂ ಅಂತ... ಆದರೆ ಸಿನಿಮಾಗಳಲ್ಲಿ ನಾನು ನೋಡ್ತಾಯಿದ್ ಒಂದ್ ವಿಷಯ ಬಹುಷಃ ಬೇರೆ ಯಾರೂ ಆ ವಯಸ್ಸಿನಲ್ಲಿ ಗಮನಿಸಿರಲಿಲ್ಲ ಅನ್ಸುತ್ತೆ... ಹೀರೋ ಇಡೀ ಸಿನಿಮಾ ಪೂರ್ತಿ ಕಷ್ಟ ಪಡ್ತಾನೆ... ಕೊನೇಗೆ ಪೋಲೀಸ್ನೋರ್ ಬಂದು ವಿಲನ್ನನ್ನ ಹಿಡ್ಕೊಂಡ್ ಹೋದ್ಮೇಲೆ "ಶುಭಂ" ಅಂತ ಬಂದ್ಮೇಲೆ ಸುಖವಾಗಿರ್ತಾನೆ... ಆದರೆ ವಿಲನ್ ಇಡೀ ಸಿನಿಮಾ ಪೂರ್ತಿ ಸುಖವಾಗಿರ್ತಾನೆ... ಕೊನೇಗೆ ಪೋಲೀಸ್ನೋರು ಅವನನ್ನ ಹಿಡ್ಕೊಂಡ್ ಹೋಗೋದಾದ್ರೂ ಎಲ್ಲಿಗೆ...? ಇನ್ನಷ್ಟು ವಿಲನ್ಗಳಿರುವ ಜೈಲಿಗೆ... ಅಲ್ಲೂ ಮಜವಾಗೇ ಇರ್ತಾನೆ... ಆದ್ರೆ ಒಂದ್ ವಿಲನ್ನಿಂದ ಪಾರಾದ ಹೀರೋಗೆ ಇದಾದ್ಮೇಲೆ ಮತ್ತೊಂದು ವಿಲನ್ ಅವನ್ ಪ್ರಾಣ ತಿನ್ನಕ್ಕೆ ಬರೋದಿಲ್ಲಾ ಅನ್ನೋದು ಏನ್ ಗ್ಯಾರೆಂಟೀ...? ನನ್ಮಗಂದು ಹುಟ್ಟಿರೋದಾದ್ರೂ ಏನಕ್ಕೆ...? ಜೀವನಾ ಇಡೀ ಹೋರಾಟ ಮಾಡಕ್ಕಾ...? ಆದ್ರೆ ಒಂದ್ ಆಪ್ಷನ್ ಇದೆ... ಹೀರೋನೂ ಆಗ್ದಲೆ ವಿಲನ್ನೂ ಆಗ್ದಲೇ ಸೇಫಾಗಿ ಸಪೋರ್ಟಿಂಗ್ ರೋಲ್ ಮಾಡ್ಕೊಂಡಿರೋದು... ಆದರೆ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ... ಆ ಥರ ಬದುಕೋದ್ರಲ್ಲಿ ಏನೂ ಮಜ ಇಲ್ಲಾ... ಒಂದೋ ವಿಲನ್ ಆಗ್ಬೇಕೂ... ಇಲ್ದೇಯಿದ್ರೆ ಹೀರೋ ಆಗ್ಬೇಕೂ... ಅಲ್ಲಾ ಹುಡುಗಾ ಆಗಿ ಹುಟ್ಟಿದೀನಿ ನಾನು... ಏನಾದ್ರೂ ಮಾಡ್ಬೇಕಲ್ವಾ...? ಹುಡುಗಿ ಆಗಿ ಹುಟ್ಟಿದ್ರೆ ಬೇರೆ ಯಾವ ವಿಧಿ ಇರ್ತಾಯಿರ್ಲಿಲ್ಲಾ... ಒಂದೋ ತಾಯಿನೋ ಅಥವಾ ತಂಗೀನೋ ಆಗಿ ಸೆಂಟಿಮೆಂಟ್ ರೋಲ್ ಮಾಡೋದು... ಇಲ್ದೇಯಿದ್ರೆ ಮರ ಸುತ್ತೋಕ್ಕೆ ಹೀರೋ ಉಜ್ಜಾಡಕ್ಕೆ ಹೀರೋಗೆ ಮಜ ಕೊಡೋಕ್ಕೆ ಹಿರೋಯಿನ್ ರೋಲ್ ಮಾಡೋದೂ... ಇಲ್ದೇಯಿದ್ರೆ ವಿಲನ್ಗೆ ಮಜ ಕೊಡೋ @#^& ಆಗೋ ಅಥವಾ ಅತ್ತೇನೋ ನಾದಿನೀನೋ ಅಜ್ಜೀನೋ ಅತ್ತಿಗೇನೋ... ನನ್ಮಗಂದು ಹೆಣ್ಮಕ್ಕಳು ಮಾಡೋ ಯಾವ ರೋಲೂ ಮಜ ಇಲ್ಲ... ಪೇಮೆಂಟೂ ಕಮ್ಮಿ... ಹುಡಗಾ ಆಗಿ ಹುಟ್ಟಿದೀನಿ... ಹೌದೂ ಒಂದೋ ವಿಲನ್ ಆಗ್ಬೇಕೂ... ಇಲ್ದೇಯಿದ್ರೆ ಹೀರೋ ಆಗ್ಬೇಕು... ಪಾಪಿಗೆ ನರಕದಲ್ಲೂ ಸುಖ... ನೀಯತ್ತಾಗಿರೋರಿಗೆ ಸ್ವರ್ಗದಲ್ಲೂ ನರಕ ಅಂತ ನನಗೆ ಬೇಗಾನೇ ಅರ್ಥಾ ಆಗೋಯ್ತೂ... ಆದರೂ ನನ್ನೊಳಗೆ ಒಂದು ನಿಷ್ಕರ್ಷೆ... ನಾನು ಹೀರೋನಾ...? ವಿಲನ್ನಾ...?
ಅವತ್ತೊಂದ್ ದಿನ ನನಗೆ ಉತ್ತರ ಸಿಕ್ಕೇ ಬಿಡ್ತು... ನಾನು ಕೆಲಸ ಮಾಡ್ತಾಯಿರೋ ಮನೇನಲ್ಲಿ ನನ್ ವಯಸ್ಸಿನ ಹುಡುಗ ಇದ್ದ ಅಂತ ಹೇಳದ್ನಲ್ಲಾ... ಆ ಮೂಶಂಡೀ ನನ್ ಮಗಂಗೆ ಒಬ್ಳೂ ಆರ್ ವರ್ಷದ್ ತಂಗಿ ಇದ್ಳೂ... ಕೆಲಸ ಮಾಡ್ತಾಯಿದ್ ಮನೇನಲ್ಲಿ ಹೊಸದಾಗಿ ಒಂದು ಸಂಪ್ ಕಟ್ಸಿದ್ರೂ... ಅದರಲ್ಲಿ ಅವಳೂ ಆಡ್ತಾ ಆಡ್ತಾ ಬಿದ್ದೋದ್ಳೂ... ಅವನು "ಅಯ್ಯಯ್ಯೋ...!!" ಅಂತ ಬೊಬ್ಬೆ ಹೊಡ್ಕೊಳೋಕ್ಕೆ ಶುರು ಮಾಡ್ದಾ... ನನ್ನ ಆನಂದಕ್ಕೆ ಪಾರವೇ ಇರಲಿಲ್ಲಾ... ಇಷ್ಟ್ ಈಸಿಯಾಗ್ ಸಿಕ್ಕಾಕ್ಕೊಂಡ್ರಲ್ಲಾ ಈ ನನ್ ಮಕ್ಳೂ... ಕದ್ದೂ ಮುಚ್ಚಿ ಸಿಕ್ಕಾಪಟ್ಟೆ ಟಿವಿ ನೋಡ್ತಾಯಿದ್ದ ನನಗೆ ಮುಂದಿನ್ ಕಥೆ ನನಗೆ ಒಂದ್ ಸೆಕೆಂಡಲ್ಲಿ ಫ್ಲ್ಯಾಶ್ ಆಗೋಯ್ತೂ... ನಾನು ಸಂಪಿಗ್ ಬೀಳ್ತೀನಿ... ಅವಳನ್ನ ಕಾಪಾಡ್ತೀನಿ... ಅವರು ನನಗೆ ಚಾಕಲೇಟ್ ಕೊಡ್ತಾರೆ... ಹಂಗೇ ಕೆಲಸದಿಂದ ಓಡಸ್ತಾರೆ... ಆ ನನ್ ಮಗನೇ ಅವಳನ್ನ ಕಾಪಾಡ್ದಾ ಅಂತ ಸರ್ಕಾರದಿಂದ ಪುರಸ್ಕಾರ ಮಣ್ಣೂ ಮಸಿ ಇತ್ಯಾದಿ ಇತ್ಯಾದಿ... ಆದರೆ ಅವನಿಗೆ ಈಜೋಕ್ಕೆ ಬರೋಲ್ವಲ್ಲಾ... ಆದರೆ ಅದನ್ನ ಕೇಳೋರ್ ಯಾರು...? "ಸತ್ತಾ ನನ್ ಮಗ..." ಅಂತ ನೀರಿಗೆ ಎಗರಿ ಅವಳನ್ನ ಬಚಾಯಿಸ್ದೇ... ಮುಂದಿನ್ ಕಥೆ ನಾನ್ ಅಂದ್ಕೊಂಡ್ಹಾಗೇ ನಡೀತೂ... ಇಷ್ಟ್ ಚಿಕ್ ವಯಸ್ಸಿಗೇ ಈ ಜಗತ್ತು ಇಷ್ಟು ಪ್ರೆಡಿಕ್ಟಬಲ್ ಆಗೋಗ್ತಾಯಿದ್ಯಲ್ಲಾ ಅಂತ ಬೇಜಾರೂ ಆಯ್ತೂ... ಅವನಿಗೆ ಪುರಸ್ಕಾರಾನೂ ಬಂತೂ... ನಾನು ಮನೇಗೂ ಬಂದಾಯ್ತೂ... ನಾನೇ ಅವಳನ್ನ ಬಚಾವ್ ಮಾಡಿದ್ದೂ ಅಂತ ನಾನು ಯಾರ್ ಹತ್ರಾನೂ ಹೇಳ್ಕೊಳೋಕ್ಕೂ ಹೋಗ್ಲಿಲ್ಲಾ... ನನ್ ಸೈಲೆನ್ಸ್ ನೋಡಾದ್ರೂ ನಾನೊಬ್ಬ ಕೇಡಿ ನನ್ ಮಗಾ ಅಂತ ಡೌಟ್ ಬರಲಿಲ್ವಲ್ಲಾ ಅವರಿಗೆ... ಕೆಟ್ಟದನ್ ಮಾಡೋದೂ... ಕೆಟ್ಟವರಾಗಿರೋದೂ ಒಂದು ಕಲೆ... ಈ ಥರ ಬುದ್ ಮಂಕರೆಲ್ಲಾ ವಿಲನ್ನಾಗಕ್ ಹೋಗಿ ಕೆಟ್ಟವರಿಗೆಲ್ಲಾ ಕೆಟ್ ಹೆಸರು ತರ್ತಾರಲ್ಲ ಅಂತ ಬೇಸರ ಆಯ್ತೂ...
ಒಂದ್ ದಿನ ಆ ಹುಡುಗ ಸ್ಕೂಲ್ ಮುಗಿಸಿಕೊಂಡು ಬರ್ತಾಯಿರೋದನ್ನ ನೋಡ್ದೇ... ಅವನೂ ನನ್ ನೋಡ್ದಾ... ಅವನಿಗೆ ತಲೆ ಎತ್ತಿ ನೋಡಕ್ಕಾಗ್ಲಿಲ್ಲಾ... ತಪ್ಪಿಸಿಕೊಳ್ಳೋಕ್ ನೋಡ್ದಾ... ನಾನು ಅವನನ್ನ ಸ್ಮೈಲ್ ಮಾಡೇ ನನಗೇನೂ ಬೇಜಾರಿಲ್ಲಾ... ತಲೆ ಕೆಡಸ್ಕೋಬೇಡಾ... ಅಂತೆಲ್ಲಾ ಅವನನ್ನ ಸಮಾಧಾನ ಮಾಡ್ದೇ... ಬಾಯಲ್ಲಿ ಹನ್ಸ್ ಇತ್ತು... "ಬೇಕಾ...?" ಅಂದೆ... ಅವನಿಗೆ ಇದು ಕೆಟ್ಟದು ಅಂತ ಅನ್ಸಿರ್ಬೇಕೂ... "ಬೇಡಾ ಅಂದ್ರೆ ನಿನ್ನಿಷ್ಟ... ನಾನು ಬಲವಂತ ಮಾಡಲ್ಲಾ... ಇದು ದೊಡ್ಡೋರಿಗೆ ಚಿಕ್ಕೋರಿಗಲ್ಲಾ..." ಅಂತ ಹೇಳ್ತಾಯಿದ್ಹಾಗೇ ಅವನು ತನಗೂ ಬೇಕೆಂದು ಹೇಳಿದ... ನಾನು ಸ್ವಲ್ಪ ಸತಾಯಿಸಿದ ಮೇಲೆ ಅವನಿಗೆ ಕೊಟ್ಟೆ... ಬಾಯಿ ವಿಪರೀತ ಉರಿಯುತ್ತಿದ್ದರೂ ತೋರಿಸಿಕೊಳ್ಳುವಂತಿಲ್ಲ... ಹೀರೋ ಅವನು... ಹಾಗೇ ಪದೇ ಪದೇ ಸಿಗ್ತಾಯಿದ್ದೆ... ನಂತರ ಅವನೇ ಹನ್ಸ್ ಗೋಸ್ಕರ ನನ್ನನ್ನೇ ಹುಡಕ್ಕೊಂಡ್ ಬರೋಕ್ ಶುರು ಮಾಡ್ದಾ... ಅವನನ್ನ ಒಂದ್ ದಿವ್ಸ ದೂರ ಕರ್ಕೊಂಡ್ ಹೋದೆ... ಕೆರೆ ಇರೋಂಥ ಜಾಗ... ನೀರೊಳಗೆ ಇಳಿದೆ... ಆದರೆ ಅವನು ಇಳಿಲಿಲ್ಲ... ಕಾರಣ ಸಿಂಪಲ್... ಅವನಿಗೆ ಈಜು ಬರೋಲ್ಲ... ನಾನು ಇರೋ ಕಡೆ ಆಳ ಏನೋ ಇತ್ತು... ಅವನನ್ನ ಆಳ ಏನೂ ಇಲ್ಲ ನಿಂತ್ಕೋಬೌದೂ ಅಂತ ಕರೆದೆ... ನಿಧಾನವಾಗಿ ಇಳಿದ... ಪುಸಕ್ ಎಂದು ನೀರು ಅವನನ್ನ ಎಳ್ಕೊಂಡ್ತೂ... ನಾವು ಬಂದಿದ್ದು ಮೊದಲೇ ಯಾವ ನರಪಿಳ್ಳೇನೂ ಇಲ್ದೇಯಿರೋ ಜಾಗಕ್ಕೆ... ನಾನು ಆರಾಮಾಗಿ ಆಚೆ ಬಂದೆ... ಅವನು ಮುಳುಗೋದನ್ನ ನೋಡ್ತಾ ಬೀಡಿ ಹಚ್ಚಿದೆ... ಅವನು ಪೂರ್ತಿ ಮುಳಗದ್ಮೇಲೆ ಸೀದಾ ಬಸ್ ಹತ್ತಿದೆ... ಒಂದು ನ್ಯೂಸ್ ಪೇಪರ್ ಆಫೀಸ್ಗೆ ಹೋದೆ... ಇದಕ್ಕೆ ಮುಂಚೆ ಪೇಪರ್ರೂ ಹಾಲೂ ಎಲ್ಲಾ ಹಾಕ್ತಾಯಿದ್ನಲ್ಲಾ... ಅದಕ್ಕೆ ಅದರ್ ಆಫೀಸ್ ಗೊತ್ತಿತ್ತು... ಅಲ್ಲಿರೋ ಅಂಕಲ್ಗೆ ಅವನು ಮುಳುಗಿ ಸತ್ತಿದ್ ಹೇಳ್ದೇ... ಅವನನ್ನ ನಾನು ಬಚಾವ್ ಮಾಡ್ದೇಯಿದ್ದಿದ್ದೂ ಹೇಳ್ದೇ... ಆ ಮನೇಯವರು ನನಗೆ ಕೊಡುತ್ತಿದ್ದ ಹಿಂಸೆ ಬಗ್ಗೇನೂ ಹೇಳ್ದೇ... ನೀರಲ್ ಬಿದ್ದಿದ್ ಅವನ್ ತಂಗೀನ ಬಚಾವ್ ಮಾಡಿದ್ದಕ್ಕೆ ಶೌರ್ಯ್ಯ ಪುರಸ್ಕಾರ ಬೇರೆ ತಗೊಂಡೋನ್ ಅವನು... ಎಲ್ಲಾ ಸಿಂಪತಿ ನನ್ ಮೇಲ್ ತಿರಗ್ತೂ...
ಪೊಲೀಸ್ ಮಾಮ ಹೇಳದ್ರೂ... "ಅಲ್ಲ ಮಗ... ನಾನೇ ಬೇಕಂತ ಅವನನ್ನ ಅಲ್ಲಿಗೆ ಕರ್ಕೊಂಡ್ ಹೋದೆ... ಅವನು ನೀರಲ್ಲಿ ಮುಳುಗಿ ಸಾಯೋದನ್ನ ನೋಡ್ಕೊಂಡ್ ಬೇಕಂತನೇ ಸುಮ್ನೆ ಇದ್ದೆ ಅಂತ ಯಾಕ್ ಒಪ್ಕೋತಾಯಿದ್ಯಾ...? ನಿನ್ನನ್ನ ಇದಕ್ಕೆ ಎಲ್ ಕಳಸ್ತಾರೆ ಗೊತ್ತಾ...?" ಅಂತ ಕೇಳ್ದಾ... ಅದಕ್ಕೆ ನಾನು ಆರಾಮಾಗ್ ಹೇಳ್ದೇ... "ಗೊತ್ತು ರಿಮ್ಯಾಂಡ್ ಹೋಮ್ ಗೆ..." "ಗೊತ್ತಿದ್ದೂ ಯಾಕ್ ಒಪ್ಕೊತಾಯಿದ್ಯಾ...?" ಎಂದಾಗ ನಾನ್ ಹೊಡೆದಿದ್ ಡೈಲಾಗ್ ನನಗೇ ಒಂಥರಾ ಮಜ ಕೊಡ್ತೂ... "ವಿಲನ್ ಆಗೋಕ್ಕೆ..."
ಆದರೆ ಏಕೋ ಗೊತ್ತಿಲ್ಲ... ಮನುಷ್ಯ ದೊಡ್ಡೋನಾಗ್ತಾಯಿದ್ದಂತೆ ಚೇಂಜ್ ಆಗ್ಬಿಡ್ತಾನೆ... ರಿಮ್ಯಾಂಡ್ ಹೋಮ್ ನಲ್ಲಿ ಓದೋ ಅವಕಾಶ ಇತ್ತು... ಮೊನ್ನೆ ತಾನೆ ಐಪಿಎಸ್ ಪಾಸ್ ಆದೆ... ವಿಲನ್ ಥರ ಯೋಚನೆ ಮಾಡೋ ಹೀರೋ ಥರ ಕೆಲಸ ಮಾಡೋ ಆಫೀಸರ್... ಬೆಸ್ಟ್ ಕ್ರೈಮ್ ಫೈಟರ್... ನಾನ್ ಎಷ್ಟ್ ಒಳ್ಳೇಯವನು ಅಂತ ಜನ ಹೇಳ್ತಾರೆ... ನಾನು ಎಷ್ಟು ಕೆಟ್ಟೋನೂ ಅಂತ ನನ್ ಕೈಲಿ ಟಾರ್ಚರ್ ಅನುಭವಿಸೋ ಖೈದಿಗಳು ಹೇಳ್ತಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ